ಪಿರಸ್
ಕ್ರಿ.ಪೂ. 318 ? - 272. ಈಶಾನ್ಯ ಗ್ರೀಸಿನ ಪ್ರಾಚೀನ ಪ್ರದೇಶವಾದ ಇಪಿರಸ್ಸಿನ ದೊರೆ. ಕ್ರಿ. ಪೂ.306 ರಲ್ಲಿ ಸಿಂಹಾಸನವನ್ನೇರಿದ. ಆಗ ಇವನಿಗೆ ಕೇವಲ ಹನ್ನೆರಡು ವರ್ಷ. ಇವನು ಸ್ವಲ್ಪ ಕಾಲ ಸಿಂಹಾಸನವನ್ನು ಕಳೆದುಕೊಂಡಿದ್ದ. ಈಜಿಪ್ಟಿನ ದೊರೆ ಟಾಲೆಮಿ ಸೋಟರನ ನೆರವಿನಿಂದ ಅದನ್ನು ಮತ್ತೆ ಪಡೆದ. (295) ಅವನ ಮಗಳಾದ ಅಂತಿಗೊನೆಯನ್ನು ಇವನು ವಿವಾಹವಾದ. ಶ್ರೇಷ್ಠ ಸಮರ ಸಾಹಸಿಯಾದ ಪಿರಸ್ ತನ್ನ ಸಂಬಂಧಿ ಟೆಮಿಟ್ರಿಯಸನನ್ನು ಸೋಲಿಸಿ ಮ್ಯಾಸಿಡೋನಿಯಾವನ್ನು ವಶಪಡಿಸಿಕೊಂಡ. ಇವನು 281 ರಲ್ಲಿ ಇಟಲಿಗೆ ಹೋಗಿ ರೋಮನ್ನರ ವಿರುದ್ಧ ಟಾರೆಂಟಮನಿಗೆ ನೆರವು ನೀಡಿದ. ಪಿರಸ್ಸನ ಯುದ್ಧ ಕೌಶಲ ಜಗತ್ಪ್ರಸಿದ್ಧವಾದ್ದು. ಇವನು ಹೆರಾಕ್ಲಿಯ (280) ಮತ್ತು ಆಸ್ಕಲಮ್‍ಗಳಲ್ಲಿ (279) ರೋಮನ್ನರನ್ನು ಸೋಲಿಸಿದ. ಆಸ್ಕಲಮ್‍ನಲ್ಲಿ ವಿಜಯ ಗಳಿಸಲು ಅವನು ಭಾರೀ ನಷ್ಟವನ್ನೇ ಅನುಭವಿಸಬೇಕಾಗಿತ್ತು. ಅದಕ್ಕಾಗಿ ಅವನನ್ನು ಅಭಿನಂದಿಸಿದಾಗ ಇವನು, ರೋಮನ್ನರ ವಿರುದ್ಧ ಅಂಥ ಇನ್ನೊಂದು ವಿಜಯ ಸಾಧಿಸಬೇಕಾದರೆ ಅಲ್ಲಿಗೆ ನಮ್ಮ ಕಥೆ ಮುಗಿದಂತೆಯೇ ಎಂದು ಉತ್ತರಿಸಿದನಂತೆ. ಅಗಾಧ ಕಷ್ಟನಷ್ಟಗಳಿಂದ ಗಳಿಸಿದ ವಿಜಯವನ್ನು ಪಿರಸ್ ವಿಜಯ ಎಂದು ಹೇಳುವುದುಂಟು. ಆ ಕಾಲದ ಅತ್ಯಂತ ಪ್ರಬಲ ಹಾಗೂ ಸುಶಿಕ್ಷಿತ ಸೈನ್ಯ ಹೊಂದಿದ್ದ ಪಿರಸ್ ಅಜೇಯರೆನಿಸಿಕೊಂಡಿದ್ದ ರೋಮನ್ನರನ್ನು ಎದುರಿಸಿದ ಪ್ರಥಮ ಗ್ರೀಕ್ ದೊರೆ. ಅಲೆಗ್ಸಾಂಡರನ ಸಂಬಂಧಿಯಾಗಿದ್ದ ಪಿರಸ್ ಆತನ ಮರಣನಂತರ ತಾನೇ ಉತ್ತರಾಧಿಕಾರಿಯಾಗಯೇಕೆಂದೂ ವಿಶಾಲ ಸಾಮ್ರಾಜ್ಯವನ್ನೂ ಸ್ಥಾಪಿಸಬೇಕೆಂದು ಆಶಿಸಿದ. ಆದರೆ ಇವನಲ್ಲಿ ಅದಕ್ಕೆ ಅಗತ್ಯವಾದ ತಾಳ್ಮೆ, ರಾಜಕೀಯ ಕೌಶಲ ಮೊದಲಾದ ಗುಣಗಳಿರಲಿಲ್ಲವಾದ್ದರಿಂದ ಇವನ ಆಕಾಂಕ್ಷೆ ಈಡೇರದೇ ಹೋಯಿತು. ಕ್ರಿ. ಪೂ. 275 ರಲ್ಲಿ ಇವನನ್ನು ರೋಮನ್ನರು ಬೆನೆವೆಂಟಮ್ ಎಂಬಲ್ಲಿ ಸೋಲಿಸಿದರು. ಗ್ರೀಸಿನ ಆರ್ಗೋಸ್ ಎಂಬಲ್ಲಿ ಕದನದಲ್ಲಿ ಇವನು ಸಾವಿಗೆ ಈಡಾದ. (272).		      (ಎಂ.ವಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ